ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ ದೇವಕಾತಿ ಕೊಪ್ಪದಲ್ಲಿ 2,705 ಮನೆಗಳನ್ನು ನಿರ್ಮಿಸಲು ಪಾಲಿಕೆಯಿಂದ ಟೆಂಡರ್ ಪ್ರಕ್ರಿಯೆ ನಡೆಸಿದೆ. ಕಾಲಮಿತಿಯೊಳಗೆ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗುವುದು. ಫಲಾನುಭವಿಗಳ ಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ. ಆದರೆ, ಇನ್ನೂ 295 ಫಲಾನುಭವಿಗಳು ಇದುವರೆಗೂ ಹಣ ಕಟ್ಟಿಲ್ಲ. ಅವರಿಗೂ ಕೊನೆ ಅವಕಾಶ ನೀಡಲಾಗುವುದು. ಇಲ್ಲವಾದರೆ ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.
ನಗರದ ನೆಹರೂ ರಸ್ತೆಯ ವೀರ ಸಾರ್ವಕರ್ ಸಂಕಿರ್ಣದಲ್ಲಿ ಆಶ್ರಯ ಸಮಿತಿಯ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸೂರಿಲ್ಲದವರಿಗೆ ಸೂರನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗಿದ್ದು, ಶಿವಮೊಗ್ಗ ನಗರದಲ್ಲಿ 4,836 ಮನೆಗಳನ್ನು ನಿರ್ಮಿಸಿಕೊಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.
ಗೋಪಶೆಟ್ಟಿಕೊಪ್ಪದಲ್ಲಿ 1836 ಮನೆಗಳನ್ನು ನಿರ್ಮಿಸಲು ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಇವರುಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಹಿಂದಿನ ಸರಕಾರ ಮಾಡದೇ ಇರುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೂರಿಲ್ಲದವರಿಗೆ ಮನೆ ದೊರಕಿಸಿಕೊಡುವ ಯೋಜನೆ ರೂಪಿಸಿತು. ವಿರುಪಿನಕೊಪ್ಪದಲ್ಲಿ 675 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಅಲ್ಲಿನ ನಿವಾಸಿಗಳಿಗೆ ಮೂಲಸೌಲಭ್ಯ ದೊರಕಿಸಿಕೊಡಲಾಗುವುದು ಎಂದು ಹೇಳಿದರು.
ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್, ಪಾಲಿಕೆ ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಎನ್.ಜೆ. ರಾಜಶೇಖರ್, ನಾಗರಾಜ್ ಇತರರಿದ್ದರು