ಸುದ್ದಿ ಕಣಜ.ಕಾಂ
ಬೆಂಗಳೂರು: ನೀವು ಅವಿವಾಹಿತರಾ? ಜೀವನ ಸಂಗಾತಿಯ ಹುಡುಕಾಟದಲ್ಲಿದ್ದೀರಾ? ಹಾಗಾದರೆ, ನೀವು ಹೆಚ್ಚು ಜಾಗರೂಕತೆ ವಹಿಸಲೇಬೇಕು. ಕಾರಣ, ಬೆಂಗಳೂರಿನಲ್ಲಿ ಇಂತಹದ್ದೇ ಜಾಲತಾಣ ನಂಬಿ ಮೋಸ ಹೋದ ಎರಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಘಟನೆ 1- ಖಾಸಗಿ ಕಂಪನಿ ಉದ್ಯೋಗಿಯೊಂದರಲ್ಲಿ ಕೆಲಸ ಮಾಡುತ್ತಿರುವ ವೈಟ್ಫೀಲ್ಡ್’ನಲ್ಲಿ ವಾಸವಾಗಿರುವ ಯುವತಿಯೊಬ್ಬಳು ಇದೇ ವೈವಾಹಿಕ ಜಾಲತಾಣದ ಮೂಲಕ 24.50 ಲಕ್ಷ ರೂ. ಮೋಸ ಹೋಗಿದ್ದಾಳೆ.
ನಡೆದಿದ್ದೇನು?: ವರನ ಹುಡುಕಾಟದಲ್ಲಿಯುವತಿ ವೈವಾಹಿಕ ಜಾಲತಾಣದಲ್ಲಿ ಸ್ವವಿವರ ಅಪ್ ಲೋಡ್ ಮಾಡಿದ್ದಳು. ಇದನ್ನು ನೋಡಿ, ಸ್ವೈನ್ ರಾಜ್ ಕಿಶೋರ್ ಎಂಬಾತ ಈಕೆಯ ಪ್ರೊಫೈಲ್ ಒಪ್ಪಿಕೊಂಡಿದ್ದ.
ತಾನು ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿ ಯುವತಿಗೆ ಸ್ವೈನ್ ಪರಿಚಯ ಮಾಡಿಕೊಂಡಿದ್ದ.
ಮದುವೆ ಆಗುವ ಪ್ರಸ್ತಾವವೂ ಇಟ್ಟಿದ್ದ ಎನ್ನಲಾಗಿದೆ. ಬಳಿಕ ಆಕೆಯ ಫೋನ್ ನಂಬರ್ ಪಡೆದು, ಇಬ್ಬರೂ ಇಮೇಲ್, ವ್ಯಾಟ್ಸ್ ಆ್ಯಪ್ನಲ್ಲಿ ಚಾಟಿಂಗ್ ಕೂಡ ಮಾಡಿದ್ದಾರೆಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸ್ವೈನ್ ರಾಜ್ ಅ.2ರಂದು ಮಲೇಷ್ಯಾಕ್ಕೆ ಹೋಗಿದ್ದಾನೆ. 3ರಂದು ಆತನಿಂದ ಯುವತಿಗೆ ಫೋನ್ ಬಂದಿದ್ದು, ಕೆಲವು ವಸ್ತು ಖರೀದಿಸಲು ಹಣದ ಕೊರತೆಯಾಗಿದ್ದು,. ಸ್ಕಾಟ್ಲ್ಯಾಂಡ್ನಲ್ಲಿರುವ ಬ್ಯಾಂಕ್ ಖಾತೆ ಭದ್ರತೆ ದೃಷ್ಟಿಯಿಂದ ಬ್ಲಾಕ್ ಮಾಡಲಾಗಿದೆ. ಹೀಗಾಗಿ, ಅಗತ್ಯ ಹಣ ಪಡೆಯಲು ಆಗುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾನೆ. ಕಣ್ಣೀರಿಗೆ ಕರಗಿ ಯುವತಿ 24.5 ಲಕ್ಷ ರೂ. ಖಾತೆಗೆ ಟ್ರಾನ್ಸ್’ಫತ್ ಮಾಡಿದ್ದಾಳೆ. ಹಣ ಖಾತೆ ಸೇರಿದ್ದ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿಲ್ಲ.
ಮೋಸ ಹೋದ ಯುವತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ.
* ಘಟನೆ 2-
ಕೆ.ಆರ್.ಪುರ ನಿವಾಸಿಯೊಬ್ಬರು ವಧು ಹುಡುಕಾಟದಲ್ಲಿದ್ದರು. ವೈವಾಹಿಕ ಜಾಲತಾಣದಲ್ಲಿ ಪ್ರೊಫೈಲ್ ಅಪ್ ಲೋಡ್ ಮಾಡಿದ್ದಾರೆ.
ಸೆ.29ರಂದು ಶಿಲ್ಪಾ ಶರ್ಮಾ ಎಂಬಾಕೆ ಪರಿಚಯವಾಗಿ ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದಾರೆ. ಯುವತಿ ತಾನು ಲಂಡನ್ನಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಮದುವೆಯಾದ ಬಳಿಕ ಇಬ್ಬರು ಲಂಡನ್’ನಲ್ಲೇ ಸಂಸಾರ ನಡೆಸುವ ಬಗ್ಗೆಯೂ ಹೇಳಿಕೊಂಡಿದ್ದಾಳೆ.
ಅ.21ರಂದು ಏಕಾಏಕಿ ಫೋನ್ ಮಾಡಿ ಲಂಡನ್’ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವುದಾಗಿ ತಿಳಿಸಿದ್ದಾಳೆ. ಕೆಲವೇ ಹೊತ್ತಲ್ಲೇ ಸಹನಾ ಗುಪ್ತಾ ಎಂಬಾಕೆ ಈತನಿಗೆ ಕರೆ ಮಾಡಿದ್ದಾಳೆ. ತಾನು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಮಡಿದ್ದಾಳೆ.
ಲಂಡನ್’ನಿಂದ ಬಂದಿರುವ ಶಿಲ್ಪಾ ಶರ್ಮಾ ಅವರಲ್ಲಿ ಯೂರೋ ಕರೆನ್ಸಿ ಇವೆ. ರೂಪಾಯಿಗೆ ಬದಲಾಯಿಸಲು ತೆರಿಗೆ ಕಟ್ಟಬೇಕೆಂದು ತಿಳಿಸಿದ್ದಾಳೆ. ಅದನ್ನು ನಂಬಿ 75 ಸಾವಿರ ರೂ. ಮಹಿಳೆ ಸೂಚಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾನೆ. ಹಣ ಕೈ ಸೇರಿದ್ದೇ ಶಿಲ್ಪಾ ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೋಟೊ: ಸೈಬರ್ ಕ್ರೈಂ