ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಾಗಲೇ ಕೋವಿಡ್ ಸಂಕಷ್ಟದಿಂದ ಸಹಜ ಸ್ಥಿತಿಗೆ ಸಾರ್ವಜನಿಕ ಬದುಕು ಮರಳುತ್ತಿದೆ. ಏತನ್ಮಧ್ಯೆ ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ 144, ಕಫ್ರ್ಯೂಗಳಿಂದಾಗಿ ವ್ಯಾಪಾರ ವಹಿವಾಟೇ ಬಂದ್ ಆಗಿತ್ತು. ಹೀಗಾಗಿ, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆ ತೆರಿಗೆ ಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.
ಕಳೆದ ಪಾಲಿಕೆ ಸಾಮಾನ್ಯ ಸಭೆಯಲ್ಲೂ ಇದಕ್ಕೆ ವಿಪಕ್ಷಗಳು ಭಾರಿ ವಿರೋಧಿಸಿದ್ದವು. ಆದರೂ ಈ ಬಗ್ಗೆ ಪಾಲಿಕೆ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.
ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ 2020-21ನೇ ಸಾಲಿಗೆ ಆಸ್ತಿ ತೆರಿಗೆಯ ಮರುಪರಿಷ್ಕರಣೆ ಅವಶ್ಯವಾಗಿರುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಪರಿಷ್ಕರಿಸಿದ ಆಸ್ತಿ ತೆರಿಗೆಯನ್ನು ಪಾವತಿಸಿ ನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಹಾಗೂ ಈ ಮೂಲಕ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು.
– ಚಿದಾನಂದ್ ಎಸ್. ವಟಾರೆ, ಆಯುಕ್ತರು, ಶಿವಮೊಗ್ಗ ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2002ರ ಏಪ್ರಿಲ್ನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಅನುಷ್ಠಾನದಲ್ಲಿದೆ. ಕರ್ನಾಟಕ ಪೌರ ನಿಗಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆಯನ್ನು ಕನಿಷ್ಠ ಶೇ.15ರಿಂದ 30ರ ವರೆಗೆ ಹೆಚ್ಚಿಸುವುದು ಪದ್ಧತಿಯಾಗಿದೆ.
ಸುದ್ದಿ ಕಣಜ ವರದಿ ಫಲಶ್ರುತಿ: ತ್ಯಾಜ್ಯ ವಿಲೇವಾರಿಯಲ್ಲಿ ಎಚ್ಚೆತ್ತ ಪಾಲಿಕೆ, ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ ಟಾರ್ಗೆಟ್
ಶೇ.15ರಷ್ಟು ತೆರಿಗೆ ಏರಿಕೆ: ಹಿಂದಿನ ನಾಲ್ಕು ಬ್ಲಾಕ್ಗಳ ಅವಧಿಯಲ್ಲಿ ಅಂದರೆ 2008-09, 2011-12, 2014-15 ಮತ್ತು 2017-18ನೇ ಸಾಲುಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗಿದೆ. ಈ ಕಾಯ್ದೆ ಅನ್ವಯ 2020-21ನೇ ಸಾಲಿನಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಹೆಚ್ಚಿಸಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ.
ಹೊಸ ವರ್ಷಕ್ಕೆ ಪಬ್, ಕ್ಲಬ್ಗಿಲ್ಲ ನಿರ್ಬಂಧ, ಡಿಜೆ, ಡ್ಯಾನ್ಸ್ ಗೆ ಪ್ರತಿಬಂಧ, ಏನಿರುತ್ತೆ ಏನಿರಲ್ಲ?
ಯಾರಿಗೆಷ್ಟು ತೆರಿಗೆ: 2017ರಿಂದ 2020ರ ಮಾರ್ಚ್ವರೆಗೆ ವಸತಿ ಉದ್ದೇಶದ ಕಟ್ಟಡಗಳಿಗೆ ಶೇ.20, ವಾಣಿಜ್ಯ ಕಟ್ಟಡಗಳಿಗೆ ಶೇ.25, ಕೈಗಾರಿಕಾ ಉದ್ದೇಶದ ಕಟ್ಟಡಗಳಿಗೆ ಶೇ.28 ಹಾಗೂ ಖಾಲಿ ನಿವೇಶನಗಳಿಗೆ ಶೇ.30ರಷ್ಟಿದ್ದ ಆಸ್ತಿ ತೆರಿಗೆಯನ್ನು 2020-21ನೇ ಸಾಲಿನಿಂದ ಆಸ್ತಿ ತೆರಿಗೆ ಮೇಲೆ ಶೇಕಡಾವಾರು 15ರಷ್ಟು ಹೆಚ್ಚಿಸಿ ಪರಿಷ್ಕೃತ ತೆರಿಗೆಯನ್ನು ಅನುಷ್ಠಾನಗೊಳಿಸಿದೆ.
2020-21ನೇ ಸಾಲಿನಲ್ಲಿ ಈಗಾಗಲೇ ಆಸ್ತಿ ತೆರಿಗೆಯನ್ನು ಪಾವತಿ ಮಾಡಿರುವ ಆಸ್ತಿ ಮಾಲೀಕರಿಗೆ 2020-21ನೇ ಸಾಲಿನ ಅವಧಿಯಲ್ಲಿ ಪರಿಷ್ಕೃತ ತೆರಿಗೆಯ ಬಾಕಿ ಇರುವ ತೆರಿಗೆಯನ್ನು 2021ರ ಮಾರ್ಚ್ ಒಳಗಾಗಿ ಪಾವತಿಸಿದ್ದಲ್ಲಿ ದಂಡರಹಿತವಾಗಿ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಆಸ್ತಿ ಮಾಲೀಕರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಕೋರಿದ್ದಾರೆ.