ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆ, ಕಾಲೇಜುಗಳಲ್ಲಿ ಯೋಗ ತರಬೇತಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಡಿಯೋ ರಿಪೋರ್ಟ್
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಸುಧಾ ಕಾರ್ಯಕ್ರಮದಡಿ 610 ಶಾಲೆ, ಕಾಲೇಜುಗಳಲ್ಲಿ ಯೋಗ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪ್ರೌಢ ಶಾಲೆ ಹಂತದಲ್ಲಿ 10ನೇ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯ ಯೋಗ ತರಬೇತಿ ನೀಡುವಂತೆ ಸೂಚನೆ ನೀಡಿದರು.
ಹೆಚ್ಚುವರಿಯಾಗಿ ಖಾಸಗಿಯವರ ನೇಮಕ: ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಒಟ್ಟು 512 ದೈಹಿಕ ಶಿಕ್ಷಕರಿದ್ದಾರೆ. ಇದರಲ್ಲಿ ಆಯುಷ್ ಇಲಾಖೆಯವರಿದ್ದು, ಇವರು ನುರಿತರಾಗಿದ್ದಾರೆ. ಇನ್ನುಳಿದ 17 ಶಿಕ್ಷಕರಿಗೆ ತರಬೇತಿಯ ಅಗತ್ಯವಿದ್ದು, ಅವರಿಗೆ ಡಿಸೆಂಬರ್ 31ರಂದು ನಿರ್ದಿಷ್ಟ ಪಠ್ಯಕ್ರಮದ ಮಾಹಿತಿಗಾಗಿ ಶಿವಮೊಗ್ಗದಲ್ಲಿ ತರಬೇತಿ ನೀಡಲಾಗುವುದು. ಖಾಲಿ ಇರುವ ಹುದ್ದೆಗಳಿಗೆ ಖಾಸಗಿಯವರನ್ನು ಬಳಸಲಾಗುವುದು ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.