ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಂದೇ ಕಟ್ಟಡದಲ್ಲಿ ಆರು ಮನೆಗಳಿರುವವರಿಗೆ ಮಹಾನಗರ ಪಾಲಿಕೆ ಶಾಕ್ ನೀಡಿದೆ. ಹೊಸದಾಗಿ ನಳದ ಸಂಪರ್ಕ ಪಡೆಯಬೇಕಾದರೆ 86,045 ರೂಪಾಯಿ ಪ್ರೋರೇಟಾ ಶುಲ್ಕ ಪಾವತಿಸಬೇಕು ಎಂಬ ನಿರ್ಧಾರ ಕೈಗೊಂಡಿದೆ. ಇದು ಆರು ಮತ್ತು ಅದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವ ಮನೆ ಮಾಲೀಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆ.
ಪ್ರೋರೇಟಾ ಶುಲ್ಕ ವಿಧಿಸುವ ಮುನ್ನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಿತ್ತು. ಆದರೆ, ಈ ವಿಚಾರವನ್ನು ಚರ್ಚೆಗೆ ತಾರದೇ ಏಕಮುಖ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಮನೆಯ ವಾರಸುದಾರರಿಗೆ ಆರ್ಥಿಕ ಹೊರೆ ಉಂಟಾಗಲಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೇಶ್ ಅವರು ಆರೋಪಿಸಿದರು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡದೇ ಪ್ರೋರೇಟಾ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಶಿವಮೊಗ್ಗ ನಗರದ ಹಲವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಕೂಡಲೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ಇಂತಹ ಅವೈಜ್ಞಾನಿಕ ನಿರ್ಧಾರ ಕೈಬಿಡಬೇಕು.
– ಎಚ್.ಸಿ.ಯೋಗೇಶ್, ವಿರೋಧ ಪಕ್ಷ ನಾಯಕ, ಪಾಲಿಕೆ
ಗಾಜನೂರು ಜಲಾಶಯದಿಂದ ಕೃಷ್ಣರಾಜ ನೀರು ಸರಬರಾಜು ಮತ್ತು ಶುದ್ಧೀಕರಣ ಕೇಂದ್ರ ಹಾಗೂ ಅಲ್ಲಿಂದ ಮನೆಗಳಿಗೆ ನೀರು ಪೂರೈಸಲು ಅಗತ್ಯವಿರುವ ಹಣದ ಹೊರೆಯನ್ನು ಗ್ರಾಹಕರ ಮೇಲೆ ಹಾಕಲಾಗಿದೆ. ಜತೆಗೆ, ಹಳೆಯ ನಳದ ಸಂಪರ್ಕ ಹೊಂದಿರುವವರಿಗೂ ಇದು ಅನ್ವಯ ಆಗುತ್ತದೆಯೋ ಅಥವಾ ಇಲ್ಲವೋ ಎಂಬುವ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ ಎಂದು ಆಪಾದಿಸಿದರು.
ಒಂದು ಕಟ್ಟಡದಲ್ಲಿ ಒಂದೇ ಮನೆ ಹೊಂದಿರುವವರಿಗೆ ಪ್ರೋರೇಟ್ ದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ಬಾಡಿಗೆ ಇತ್ಯಾದಿ ಉದ್ದೇಶಗಳಿಗೆ ನಿರ್ಮಾಣ ಮಾಡಿರುವ ಮನೆಗಳಿದ್ದಲ್ಲಿ ಅಂತಹವರ ಜೇಬು ಸುಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ । ಲಕ್ಷಾಂತರ ಜನರಿಗೆ ಪಿಡುಗಾಗಿ ಕಾಡುತ್ತಿರುವ ಹಕ್ಕಿ ಜ್ವರ ಕಂಪ್ಲೀಟ್ ರಿಪೋರ್ಟ್
ಏನಿದು ಪ್ರೋರೇಟಾ: ಹೆಡ್ ವರ್ಕ್ಸ್ ನಲ್ಲಿ 3420 ರೂಪಾಯಿ, ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಗೆ 2370 ರೂ., ರೈಸಿಂಗ್ ಮೇನ್ 8ಕ್ಕೆ 11893, ರೈಸಿಂಗ್ ಮೇನ್ 8ಎಗೆ 42182, ಆರ್.ಎಂ 8 ಪಂಪಿಂಗ್ ಮೆಷನರಿಗೆ 936, ಆರ್.ಎಂ 8ಎ ಪಂಪಿಂಗ್ ಮೆಷನರಿಗೆ 13638 ರೂ., ಪಂಪ್ ಹೌಸ್ 194 ರೂ ಹಾಗೂ ಬಸವೇಶ್ವರ ನಗರದಲ್ಲಿ 5.0 ಎಲ್.ಎಲ್ ಸಾಮರ್ಥ್ಯದ ಒ.ಎಚ್.ಟಿಗೆ 11412 ರೂ. ಸೇರಿ ಒಟ್ಟು 86,045 ರೂ. ಖರ್ಚಾಗುತ್ತದೆ. ಇದರ ಹೊರೆಯನ್ನು ತೆರಿಗೆದಾರರ ಮೇಲೆ ಹೊರಿಸಲಾಗುತ್ತಿದೆ ಎಂದು ಆರೋಪಿಸಿದರು.
ನಳದ ಸಂಪರ್ಕ ಪಡೆಯುವುದಕ್ಕಾಗಿ ಏಕ ಕಾಲಕ್ಕೆ ಪ್ರೋರೇಟಾ ಶುಲ್ಕ ಪಾವತಿಸಬೇಕಾಗುತ್ತದೆ.
ಮಾಧ್ಯಮಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ರೇಖಾ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.