ಸುದ್ದಿ ಕಣಜ.ಕಾಂ
ಶಿವಮೊಗ್ಗ: ಏಷಿಯಾ ಒನ್ ಮ್ಯಾಗ್ಝಿನ್ ಪ್ರತಿ ವರ್ಷ ಆಯ್ಕೆ ಮಾಡುವ ಏಷ್ಯಾದ ಪ್ರಭಾವಿಗಳ ಪಟ್ಟಿಯಲ್ಲಿ ಮಲೆನಾಡಿನ ಪ್ರತಿಭೆ ಹಾಗೂ ಅಡಕೆ ಟೀ ಸಂಶೋಧಕ ನಿವೇದನ್ ನೆಂಪೆ ಆಯ್ಕೆಯಾಗಿದ್ದಾರೆ.
40 ವರ್ಷದೊಳಗಿನ 40 ವ್ಯಕ್ತಿಗಳನ್ನು 2020-21ನೇ ಸಾಲಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ನೆಂಪೆಯೂ ಒಬ್ಬರಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸುವಂತೆಯೇ ಏಷ್ಯಾ ಖಂಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಅವರ ಬಗ್ಗೆ ಅಧ್ಯಯನ ನಡೆಸಿದ ನಂತರ ಪಟ್ಟಿ ಸಿದ್ಧಪಡಿಸುತ್ತದೆ. ಅಂತಹವರ ಸಾಲಿನಲ್ಲಿ ನಿವೇದನ್ ಆಯ್ಕೆಯಾಗಿದ್ದು, ಮಲೆನಾಡಿನ ಕೀರ್ತಿ ಮತ್ತಷ್ಟು ಉತ್ತುಂಗಕ್ಕೆ ಒಯ್ದಿದ್ದಾರೆ.
ಹೇಗೆ ನಡೆಯುತ್ತೆ ಆಯ್ಕೆ
ಕೆಲವು ತಿಂಗಳುಗಳ ಕಾಲ ಏಷ್ಯಾ ಖಂಡದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಪತ್ತೆ ಹಚ್ಚಲಾಗುತ್ತದೆ. ಅದಕ್ಕೋಸ್ಕರವಾಗಿಯೇ ಸಂಪಾದಕೀಯ ತಂಡ ಹಾಗೂ ಉದ್ದಿಮೆ ಮತ್ತು ಗ್ರಾಹಕರ ಆನ್ಲೈನ್ ರಿಸರ್ಚ್ ಪೋಲ್ ಮೂಲಕ ಪ್ರಭಾವಿ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಏಷ್ಯಾ ಖಂಡದಲ್ಲೇ ಪ್ರಭಾವಿ ಮ್ಯಾಗ್ಝಿನ್ ಎನಿಸಿಕೊಂಡಿರುವ ಪೋಬ್ರ್ಸ್ ನಿಯತಕಾಲಿಕೆ ಇಂತಹವರ ಪಟ್ಟಿ ಸಿದ್ಧಪಡಿಸಿ ಅದನ್ನು ಪ್ರಕಟಿಸುತ್ತದೆ.
ಯಾರು ಈ ನಿವೇದನ್ ನೆಂಪೆ?
ನಿವೇದನ್ ನೆಂಪೆ ಅವರು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದವರು. ಎರಡು ವರ್ಷಗಳ ಹಿಂದೆ ಅಡಕೆ ಟೀ ಸಂಶೋಧನೆ ಮಾಡಿ ಗಮನ ಸೆಳೆದಿದ್ದರು. ಅಡಕೆ ಉಪ ಉತ್ಪನ್ನ ತಯಾರಿಕೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಡಕೆ ಟೀಗೆ ಮೇಕ್ ಇನ್ ಇಂಡಿಯಾ ಪ್ರಶಸ್ತಿ ನೀಡಲಾಗಿತ್ತು. ಅಡಕೆ ಶಾಂಪೂ, ಜ್ಯೂಸ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಸಂಶೋಧಿಸಿದ್ದಾರೆ.