ಸುದ್ದಿ ಕಣಜ.ಕಾಂ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸಿದ್ದೇ, ಅದೇ ದಿನ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ರಾಜಕೀಯ ಚದುರಂಗದಾಟದಲ್ಲಿ ಗೆದ್ದಿದ್ದು ಮಾತ್ರ `ರಾಜಾಹುಲಿ’.
ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿದ್ದ ಘಟಾನುಘಟಿಗಳು ಹಾಗೂ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಕೆಳಗಿಳಿದ ಕ್ಷಣದಿಂದಲೇ ಅದೆಷ್ಟೋ ಹೆಸರುಗಳು ಕೇಳಿ ಬರುತ್ತಿದ್ದವು. ಆದರೆ, ಹೈಕಮಾಂಡ್ ಯಡಿಯೂರಪ್ಪ ಅವರ ಆಪ್ತರಿಗೆ ರೆಡ್ ಕಾರ್ಪೆಟ್ ಹಾಸಿದೆ. ಬರೀ ಸಿಎಂ ಗದ್ದುಗೆ ಮಾತ್ರವಲ್ಲ, ಡಿಸಿಎಂಗಳೂ ಯಡಿಯೂರಪ್ಪ ಅವರ ಆಪ್ತರೇ ಆಗಿರುವುದು ಬಿ.ಎಸ್.ವೈ. ಮೇಲುಗೈ ಆಗಿರುವುದಕ್ಕೆ ಸಾಕ್ಷಿಯಾಗಿದೆ.
https://www.suddikanaja.com/2020/11/05/love-jihad-will-ban-surly-soon/
ಬಿ.ಎಸ್.ವೈ. ಹಠ ಹಿಡಿದರೆ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಆಗಬಹುದಾದ ಸ್ಥಿತ್ಯಂತರ, ಬರುವ ಚುನಾವಣೆಗಳಲ್ಲಿ ಓಟ್ ಬ್ಯಾಂಕ್ ಮೇಲಾಗಬಹುದಾದ ಪರಿಣಾಮ, ಇನ್ನೆರಡು ವರ್ಷಗಳ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಯಡಿಯೂರಪ್ಪ ಅವರು ಸೂಚಿಸಿದವರನ್ನು ಸಿಎಂ ಸ್ಥಾನ ನೀಡಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಬಿ.ಎಸ್.ವೈ-ಬೊಮ್ಮಾಯಿ ಉತ್ತಮ ಸಂಬಂಧ | ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರ ನಡುವೆ ಉತ್ತಮ ಸಂಬಂಧವಿದೆ. ಬೊಮ್ಮಾಯಿ ಅವರು ಜನತಾ ಪರಿವಾರದಿಂದ ಬಂದಿದ್ದರೂ 2008ರಲ್ಲಿ ಬಿಜೆಪಿ ಸೇರಿದರು. ಬಿಜೆಪಿಯಿಂದ ಟಿಕೆಟ್ ಪಡೆದು 2008ರ ಚುನಾವಣೆಯಲ್ಲಿ ಶಿಗ್ಗಾವಿ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಯಡಿಯೂರಪ್ಪ ಅವರು ರೆಬೆಲ್ ಆಗಿ ರಾಜ್ಯದಲ್ಲಿ ಕೆಜೆಪಿ ಕಟ್ಟಿದ್ದಾಗ ಬೊಮ್ಮಾಯಿ ಅವರು ಯಡಿಯೂರಪ್ಪ ಅವರೊಂದಿಗೆ ಹೋಗಿರಲಿಲ್ಲ. ನಂತರವೂ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ಆದರೆ, ಬದಲಾದ ಕಾಲಕ್ಕೆ ಅನುಗುಣವಾಗಿ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ. ವಿಶೇಷವೆಂದರೆ, ಒಬ್ಬರ ಮಾತು ಇನ್ನೊಬ್ಬರು ತಳ್ಳಿ ಹಾಕದಷ್ಟು ಆತ್ಮೀಯತೆ ಇದೆ.
ಡಿಸಿಎಂ ಸ್ಥಾನಕ್ಕೂ ಬಿ.ಎಸ್.ವೈ ಆಪ್ತರು | ಉಪ ಮುಖ್ಯಮಂತ್ರಿ ಸ್ಥಾನವನ್ನೂ ಯಡಿಯೂರಪ್ಪ ಅವರ ಆಪ್ತರಿಗೆ ನೀಡಲಾಗಿದೆ. ಅದರಲ್ಲೂ ಮೂರು ಪ್ರಬಲ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಆರ್.ಅಶೋಕ್(ಒಕ್ಕಲಿಗ), ಗೋವಿಂದ್ ಕಾರಜೋಳ (ಪರಿಶಿಷ್ಟ ಜಾತಿ) ಮತ್ತು ಬಿ.ಶ್ರೀರಾಮುಲು (ವಾಲ್ಮೀಕಿ-ಎಸ್.ಟಿ) ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಕೂಡ ಈ ಹಿಂದೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬೊಮ್ಮಾಯಿ ಬಗ್ಗೆ ಕಿರು ಪರಿಚಯ | 1960ರ ಜನವರಿ 18ರಂದು ಧಾರವಾಡದಲ್ಲಿ ಜನಿಸಿದ್ದಾರೆ. 2008ರಲ್ಲಿ ಜೆಡಿ(ಯು)ದಿಂದ ಬಿಜೆಪಿಗೆ ಸೇರ್ಪಡೆಯಾದರು. ಸಹಕಾರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
https://www.suddikanaja.com/2021/07/14/swamiji-prophesied-about-state-politics/