ಸುದ್ದಿ ಕಣಜ.ಕಾಂ
ಸಾಗರ: ಸಾಗರದಿಂದ ತುಮರಿ, ಮರಕುಟಕದ ಮೂಲಕ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 369-ಇ ಸಮರ್ಪಕ ನಿರ್ವಹಣೆ ಇಲ್ಲದೇ ರೋಸಿದೆ.
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಸಾಗರದಿಂದ ಹೊಳೆಬಾಗಿಲು ಸಿಗಂದೂರು ಮಾರ್ಗವಾಗಿ ಬೈಂದೂರು ಸಂಪರ್ಕಿಸುವ ಬಹುಮುಖ್ಯ ರಾಷ್ಟ್ರೀಯ ಹೆದ್ದಾರಿ 369-ಇ ರಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೆದ್ದಾರಿಯ ಮೇಲೆಯೇ ಮರಗಳು ಉರುಳಿತಿದ್ದು, ಸಂಚರಿಸುವವರಿಗೆ ತೊಂದರೆ ಆಗುತ್ತಿದೆ.
ಡೆಡ್ಲಿ ಹೆದ್ದಾರಿಯಲ್ಲಿ ಅಪಾಯದ ಸಂಚಾರ | ಶ್ರೀ ಕ್ಷೇತ್ರ ಸಿಗಂದೂರು ಸೇರಿದಂತೆ ಉಡುಪಿ, ಕುಂದಾಪುರ, ಕೊಡಚಾದ್ರಿ, ಕೊಲ್ಲೂರು, ಧರ್ಮಸ್ಥಳ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ವಿಪರೀತ ಮಳೆಯಿಂದ ರಸ್ತೆ ಬದಿಯಲ್ಲಿನ ಮಣ್ಣು ಗುಡ್ಡೆಗಳು ಕುಸಿದ ಪರಿಣಾಮ ರಸ್ತೆಯಲ್ಲಿ ಮಣ್ಣು ನಿಂತು ವಾಹನ ಸಂಚಾರ ಸಂಪೂರ್ಣ ಹದಗೆಟ್ಟಿದೆ. ರಸ್ತೆಗೆ ಬಿದ್ದಿರುವ ಮರಗಳನ್ನು ತಿಂಗಳು ಕಳೆದರೂ ತೆರವುಗೊಳಿಸದೆ ಇರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲ ಆಗುತ್ತಿದೆ. ಹಲವು ಬಾರಿ ಈ ಬಗ್ಗೆ ದೂರು ನೀಡಿದರು ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಸಿಗಂದೂರು ಸೇತುವೆ ನಿರ್ಮಾಣಕ್ಕೆ ಚಾಲನೆಯ ಜೊತೆಗೆ ರಸ್ತೆಯನ್ನು ಸಹ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹೀಗಾಗಿ, ಕಳೆದ ಎರಡು ವರ್ಷಗಳಿಂದ ಇದರ ಸಂಪೂರ್ಣ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ವಹಣೆ ಮಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಗೆ ಒಳಪಡುವುದರಿಂದ ಸ್ಥಳೀಯ ಆಡಳಿತ ಕೂಡ ನಿರ್ವಹಣೆಯ ಗೋಜಿಗೆ ಹೋಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಪರಿಣಾಮ ಸಾರ್ವಜನಿಕರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ.
ಸೂಚನಾ ಫಲಕವೂ ಇಲ್ಲದೇ ಅಪಾಯ | ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಷ್ಟವಾದ ಸೂಚನಾ ಫಲಕಗಳು ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು, ತಿರುವು ಹಾಗೂ ಉಬ್ಬು ಪ್ರದೇಶದಲ್ಲಿ ಸೂಕ್ತ ಘಲಕಗಳ ಅಳವಡಿಕೆ ಮಾಡಬೇಕು. ಪಶ್ಚಿಮ ಘಟ್ಟದ ಮೂಲಕ ಹಾದು ಹೋಗುವ ರಸ್ತೆಯಾಗಿರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಅಪಾಯಕ್ಕೆ ಅಹ್ವಾನಿಸಲಿದೆ.
ಟ್ಯಾಕ್ಸಿ ಚಾಲಕರ ಅಸಮಾಧಾನ | ಶ್ರೀ ಕ್ಷೇತ್ರ ಸಿಗಂದೂರಿಗೆ ತಿಂಗಳಿಗೆ ಕನಿಷ್ಠ 2-3 ಭಾರಿ ದರ್ಶನಕ್ಕೆ ಬರುತ್ತೇವೆ ಸಿಗಂದೂರಿನಿಂದ – ಮರಕುಟಕದ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಮರಗಳು ಉರುಳಿ ಬೀಳುತ್ತಲೇ ಇರುತ್ತವೆ. ಸ್ಥಳೀಯರ ಸಹಾಯದಿಂದ ನಾವೇ ತೆರವುಗೊಳಿಸುತ್ತೇವೆ. ರಾತ್ರಿ ವೇಳೆ ಇಂತಹ ಘಟನೆ ನಡೆದರೆ ಯಾರು ಸಹಾಯಕ್ಕೆ ಬರುವುದಿಲ್ಲ. ಇದರಿಂದ ತೊಂದರೆ ಆಗುತ್ತಿದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕರು.
ರಾಷ್ಟ್ರೀಯ ಹೆದ್ದಾರಿಯ ಸುಮಾರು 40 ಕಿ.ಮೀ. ವ್ಯಾಪ್ತಿಯ ವರೆಗೆ ಇದೆ ಸ್ಥಿತಿ ಇದೆ. ಆದ್ದರಿಂದ ಆದಷ್ಟು ಬೇಗ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುದಾಗಿ ಸ್ಥಳೀಯರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
https://www.suddikanaja.com/2021/03/30/mayor-visit-to-rml-nagar/