ಸುದ್ದಿ ಕಣಜ.ಕಾಂ | KARNATAKA | PADA KANAJA
ಬಾಟಾ= ಮಾರ್ಗ ಈ ಎರಡು ಶಬ್ದಗಳಿಗೂ ದಾರಿ ಎಂದೇ ಅರ್ಥ. ಬಾಟಾ ಎನ್ನುವುದು ಕನ್ನಡಕ್ಕೆ ಹಿಂದಿಯ ಬಾಟ್ ಎಂಬ ಶಬ್ದದಿಂದ ಬಂದಿದೆ. ಹಿಂದಿಗೆ ಅದು ಸಂಸ್ಕೃತದ ವಾಟ= ದಾರಿ ಎಂಬ ಶಬ್ದದಿಂದ ಬಂದಿದೆ. ಹೀಗೆ ಎರಡು ಶಬ್ದಗಳು ಒಂದೇ ಅರ್ಥವುಳ್ಳವು ಒಟ್ಟು ಸೇರಿ ಒಂದೇ ಶಬ್ದವಾಗುವ ಪ್ರಸಂಗಗಳು ಭಾಷೆಗಳಲ್ಲಿ ಬರುವುದುಂಟು.
ಆದರೆ, ಬಾಟಾ ಮಾರ್ಗ ಎಂಬುವುದಕ್ಕೆ ಕನ್ನಡದಲ್ಲಿ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಎಂಬ ಅರ್ಥವಿದೆ. ಕನ್ನಡದಲ್ಲಿ ವೆಂಕಟಾಚಾರ್ಯರ ಕಾದಂಬರಿಗಳಲ್ಲಿ ಈ ಶಬ್ದ `ಭಾಟಾ ಮಾರ್ಗಾ’ ಎಂದು ಮಹಾಪ್ರಾಣ ಸಹಿತವಾಗಿ ಪ್ರಯೋಗವಾಗಲು ಮೊದಲಾದ ಕಾಲದಿಂದ ಭಾಟಾ ಮಾರ್ಗ ಎಂಬುವುದೇ ಕನ್ನಡದಲ್ಲಿ ಹೆಚ್ಚು ಜನಪ್ರಿಯ ಶಬ್ದವಾಗಿದೆ.
ಕೆಲವರು `ಬಾಟಾ ಮಾರ್ಗ’ ಎಂದೂ ಉಪಯೋಗಿಸುತ್ತಾರೆ. ಈ ಕಾರಣದಿಂದ ಕನ್ನಡದಲ್ಲಿ ಎರಡೂ ರೂಪಗಳು ಒಪ್ಪಿಗೆಯಾದವು ಎಂದು ತಿಳಿಯಬೇಕು. ಆ ಶಬ್ದಕ್ಕೆ ರಾಷ್ಟ್ರೀಯ ಹೆದ್ದಾರಿ ಎಂದೇ ಅರ್ಥ. ಆದರೆ, ರಾಷ್ಟ್ರೀಯ ಹೆದ್ದಾರಿ ಎಂಬ ಶಬ್ದ ವೆಂಕಟಾಚಾರ್ಯರ ಕಾಲದಲ್ಲಿ ಇನ್ನೂ ಪ್ರಚಾರಕ್ಕೆ ಬಂದಿರಲಿಲ್ಲ. ಭಾಟಾ ಮಾರ್ಗಾ ಎಂಬುವುರನ್ನು ಟ್ರಂಕ್ ರೋಡ್ ಎಂಬುದಕ್ಕೆ ಸಮಾನವಾಗಿ ಉಪಯೋಗಿಸುತ್ತಿದ್ದರು.
`ಟ್ರಂಕ್ ರೋಡ್’ ಎಂದರೆ `a large long distance transportation road’ ಎಂದು ವಿವರಣೆ ಇದೆ. ರಾಜಮಾರ್ಗ, ದೊಡ್ಡ ರಸ್ತೆ, ರಾಷ್ಟ್ರೀಯ ಹೆದ್ದಾರಿ ಎಂದೂ ಕರೆಯಬಹುದು. ಆದರೆ, ಈಗಿನ ಹಿಂದಿ ಭಾಷೆಯಲ್ಲಿ ಭಾಟಾ ಎಂಬ ಶಬ್ದ ಪ್ರಯೋಗ ಬಹುತೇಕ ನಿಂತೇ ಬಿಟ್ಟಿದೆ. ಅದರ ಬದಲು `ರಾಸ್ತಾ’ ಎಂಬ ಶಬ್ದ ಹೆಚ್ಚು ಬಳಕೆಯಲ್ಲಿದೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/09/05/chitradurga-shivamogga-national-highway-work-started/