ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಹಾಗೂ ತಜ್ಞ ವೈದ್ಯರ ಸಭೆಯು ಭಾನುವಾರ ನಡೆಯಿತು.
- ಸರ್ಕಾರದ ಮಾರ್ಗಸೂಚಿ ಪ್ರಕಾರ ಶಾಲಾ ಕಾಲೇಜುಗಳನ್ನು ನಡೆಸಬೇಕು. ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ವಿದ್ಯಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅನುಮತಿ ಪಡೆದ ಬಳಿಕ ರಜೆ ನೀಡಬಹುದಾಗಿದೆ. ಅನಾರೋಗ್ಯದಿಂದ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು.
- ಕೋವಿಡ್ ಹರಡದಂತೆ ತಡೆಯಲು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಬೇಕು.
- ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದರೆ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ, ವಸತಿ ನಿಲಯವನ್ನು ಸೀಲ್ ಡೌನ್ ಮಾಡಿ ವಿದ್ಯಾರ್ಥಿಗಳನ್ನು ಅಲ್ಲಿಯೇ ಇರಿಸಿಕೊಳ್ಳಬೇಕು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಕುಮಾರ್ ಹೇಳಿದ್ದೇನು?
- ಜಿಲ್ಲೆಯಲ್ಲಿ ಲಸಿಕೆ ಪಡೆದವರ ಪ್ರಮಾಣ ರಾಜ್ಯಮಟ್ಟಕ್ಕೆ ಹೋಲಿಸಿದರೆ ಕಡಿಮೆಯಿದೆ. ಅಭಿಯಾನದ ರೀತಿಯಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೂರನೇ ಡೋಸ್ ನೀಡುವ ಕಾರ್ಯವನ್ನು ಚುರುಕುಗೊಳಿಸಬೇಕು.
- ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟಿವ್ ವ್ಯಕ್ತಿಗಳ ಹೋಂ ಕ್ವಾರೆಂಟೈನ್ ಪ್ರಮಾಣ ಶೇ.95ರಷ್ಟಿದ್ದು, ಪ್ರಾಥಮಿಕ ಸಂಪರ್ಕಿತರಿಗೆ ಕನಿಷ್ಠ 3 ದಿನ ಹೋಂ ಕ್ವಾರೆಂಟೈನ್ ಖಾತ್ರಿಪಡಿಸಬೇಕು. ಹೋಂ ಕ್ವಾರೆಂಟೈನ್ನಲ್ಲಿರುವವರಿಗೆ ಅಗತ್ಯ ಔಷಧಿಗಳನ್ನು ಒಳಗೊಂಡ ಕಿಟ್ ಕಡ್ಡಾಯವಾಗಿ ಒದಗಿಸಬೇಕು.
ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಹೇಳಿದ್ದೇನು?
ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದರೆ ಗಾಬರಿಯಾಗುವ ಅಗತ್ಯವಿಲ್ಲ. ಮೂರನೆ ಅಲೆಯಲ್ಲಿ ವೈರಸ್ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕೊರೊನಾ ಪಾಸಿಟಿವ್ ಬಂದ ಯಾವುದೇ ಮಕ್ಕಳು ಇದುವರೆಗೆ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬಿದ್ದಿಲ್ಲ. ಮಕ್ಕಳ ಮೂಲಕ ಕೊರೊನಾ ಹಿರಿಯರಿಗೆ ಹರಡಿದರೆ ಸಾಮುದಾಯಿಕ ಪ್ರತಿರೋಧ ಶಕ್ತಿ (ಹರ್ಡ್ ಇಮ್ಯೂನಿಟಿ) ಬಹು ಬೇಗನೇ ಬರಲು ಸಾಧ್ಯವಿದೆ. ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ, ಪಾಸಿಟಿವ್ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡುವುದು ಸಮಂಜಸವಲ್ಲ. ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆಯಾದರೆ ತರಗತಿಗಳಿಗೆ ರಜೆ ನೀಡಬಹುದು.
READ | ಶಿವಮೊಗ್ಗದಲ್ಲಿ ಗಾಂಜಾ ಹಾವಳಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಉಪಸ್ಥಿತರಿದ್ದರು.
https://www.suddikanaja.com/2022/01/18/the-school-is-scheduled-to-give-three-days-holiday-as-coronavirus-infection-spreads-rapidly-in-shivamogga-city-said-rdpr-minister-ks-eshwarappa/