ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ (Geetha Shivarajkumar) ಸೋಮವಾರ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು. ಈ ವೇಳೆ ಗೀತಾ ಜೊತೆ ಪತಿ ಶಿವರಾಜಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಇದ್ದರು.
READ | ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಬಳಿ ಆಸ್ತಿ ಎಷ್ಟಿದೆ? ಈಶ್ವರಪ್ಪ ಮೇಲಿದೆ ಭಾರೀ ಸಾಲ!
ಗೀತಾ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ನಟ ಶಿವರಾಜಕುಮಾರ್ ಅವರತ್ತ ಕೈಬೀಸಿ ‘ಶಿವಣ್ಣ, ಶಿವಣ್ಣ’ ಎಂದು ಕೂಗಿದರು.
ನಾಮಪತ್ರ ಸಲ್ಲಿಕೆ ನಂತರ ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಸೇರಿದ್ದರು.
ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರ ಮನ ಗೆದ್ದಿವೆ. ಪ್ರಚಾರದ ವೇಳೆಯಲ್ಲಿ ಮಹಿಳೆಯರು ಹೆಚ್ಚಿನ ಒಲವು ತೋರುತ್ತಿದ್ದಾರೆ. ನನಗೆ ನಂಬಿಕೆ ಇದೆ. ಜನರು ಕೈ ಬಿಡುವುದಿಲ್ಲ.
– ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ
ಮೆರವಣಿಗೆಯಲ್ಲಿ ಏನೆಲ್ಲ ವಿಶೇಷ?
- ಉರಿ ಬಿಸಿಲಿನಲ್ಲಿ ತೆರೆದ ವಾಹನದಲ್ಲಿ ಹೊರಟ ಗೀತಾ ಶಿವರಾಜಕುಮಾರ್ ಅವರ ಮೆರವಣಿಗೆಯಲ್ಲಿ ಬೊಂಬೆ ಕುಣಿತ, ವಾದ್ಯ ಮೇಳಗಳು ರಂಗು ತುಂಬಿತು. ಈ ವೇಳೆ ಬೆಂಬಲಿಗರು ಹೂವಿನ ಮಳೆ ಸುರಿಸಿದರು.
- ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವರಿಗೆ ಮಜ್ಜಿಗೆ, ನೀರಿನ ಪ್ಯಾಕೆಟ್ ಹಂಚಲಾಯಿತು.
- ಮೆರವಣಿಗೆ ಗಾಂಧಿ ಬಜಾರ್‌ಗೆ ಬರುತ್ತಿದ್ದಂತೆಯೇ ಇಲ್ಲಿನ ವಿವಿಧ ಸಂಘಟನೆಯ ಮುಖಂಡರಿಂದ ಗೀತಾ ಶಿವರಾಜಕುಮಾರ ಅವರಿಗೆ ಹೂವಿನ ಹಾಕಿ, ಉಡಿ ತುಂಬಿ ಹರಸಿದರು. ಸೇಬು ಹಣ್ಣಿನ ಹಾರ ಹಾಕಿ ಬೆಂಬಲ ಸೂಚಿಸಿದರು.
- ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪ್ಲೇಕಾರ್ಡ್ ರಾರಾಜಿಸಿದವು. ಮೇರವಣಿಗೆಯ ದಾರಿಯುದ್ದಕ್ಕೂ ಸಚಿವ ಮಧುಬಂಗಾರಪ್ಪ ಹಾಗೂ ಶಿವರಾಜಕುಮಾರ್ ಅವರು ಮತಯಾಚಿಸಿದರು.
- ಬಿಸಿಲಿನ ಅಬ್ಬರದ ನಡುವೆ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಲೋಕಸಭಾ ಚುನಾವಣೆ ಕಾವು ಹೆಚ್ಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ನಟ ಶಿವರಾಜಕುಮಾರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್, ಬಿ.ಕೆ.ಸಂಗಮೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ,ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಕೆ.ಸುಕುಮಾರ್ ಶೆಟ್ಟಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ, ಎಚ್.ಸಿ.ಯೋಗೀಶ್, ಎನ್.ರಮೇಶ್, ಶ್ರೀನಿವಾಸ್ ಕರಿಯಣ್ಣ ಇದ್ದರು.